ಮಂಗಳವಾರ, ಅಕ್ಟೋಬರ್ 1, 2013

ಪತ್ರ ಪಲ್ಲವಿ- 1


ಪತ್ರ ಪಲ್ಲವಿ ಸರಣಿಯ ಬಗ್ಗೆ...


ಪ್ರಾಣಕಾಂತ ಮತ್ತವನ ಬಣ್ಣದ ಕುಂಚ

ಗ್ರಂಥಾಲಯದ ಬಾಗಿಲುಗಳನ್ನು ನೋಡಿ ಒಳಗೆ ಹೋಗುವ ಮುನ್ನ ದೇವರ ಹೆಸರನ್ನು ಜಪಿಸುತ್ತಿದ್ದ ಸಂಜೀವನಿಗೆ, ಅದೇ ಗ್ರಂಥಾಲಯದಲ್ಲಿ ತನ್ನದೇ ಅಪೂರ್ವ ಪ್ರೇಮ ಕಥೆಯೊಂದು ಅರಳುತ್ತದೆಯೆಂಬ ಕಲ್ಪನೆಯೇ ಇರಲಿಲ್ಲ. ಎರಡೂವರೆ ವರ್ಷಗಳಿಂದ ಅದೇ ಕಾಲೇಜಿನಲ್ಲಿ ಓದಿ, ಕಮ್ಮಿ ಎಂದರೂ ಇನ್ನೂರು ಬಾರಿ ಇದೇ ಲೈಬ್ರರಿಯಲ್ಲಿ ಗಿರಕಿ ಹೊಡೆದಿದ್ದ ಮೊಂಡ ಹುಡುಗ, ಇಲ್ಲೊಬ್ಬಳು ತನ್ನನ್ನು ಸೆಳೆಯುವ ಸೂಜಿಗಲ್ಲಾಗುತ್ತಾಳೆ ಎಂದು ಎಣಿಸಿರಲಿಲ್ಲ. 

ತನಗನ್ನಿಸಿದ್ದನ್ನು ವ್ಯಕ್ತಪಡಿಸುವ ಕಲೆ ಅವನು ಕರಗತ ಮಾಡಿಕೊಂಡಿರಲಿಲ್ಲ, ಪ್ರಾಯಶಃ ತಾನು ಮಾತನಾಡಿದ್ದೇ ಕಡಿಮೆ. ಹೊಸತಾದ, ಹಳೆಯ, ರಸವತ್ತಾದ, ರಸಹೀನ, ಎಲ್ಲ ರೀತಿಯ ಕಾವ್ಯಾತ್ಮಕ, ವೈಚಾರಿಕ ಹೊತ್ತಿಗೆಗಳನ್ನು ಓದಿಕೊಂಡು, ತನ್ನ ಆಲೋಚನಾಲಹರಿಯನ್ನು ಶ್ರೀಮಂತಗೊಳಿಸಿಕೊಂಡಿದ್ದ. ಆದರೆ ಅಭಿವ್ಯಕ್ತಿಗೆ ಅವಕಾಶಗಳು ವಿರಳವಾಗಿಯೇ ಉಳಿದುಕೊಂಡಿದ್ದವು.

ಈಗ ತನ್ನಲ್ಲಿ ಅಡಗಿ ಕುಳಿತಿದ್ದ ಸಾವಿರಾರು ಮಾತುಗಳನ್ನು, ಅಭಿಪ್ರಾಯಗಳನ್ನು, ಕೆಲವೇ ಪದಗಳ ಒಂದು ಪತ್ರದಲ್ಲಿ ಬಂಧಿಸಿ ಕಿಸೆಯಲ್ಲಿಟ್ಟುಕೊಂಡು, ಸ್ಮಿತಾ ಕುಳಿತಿದ್ದ ಮೇಜಿನೆಡೆಗೆ ಹೆಜ್ಜೆ ಹಾಕತೊದಗಿದ. ಅವಳೆದುರಿಗಿದ್ದ ಖಾಲಿ ಖುರ್ಚಿ ಎಳೆದುಕೊಂಡು, ಅವಳಿಗೆ ಮುಖಗೊಡುವ ಹಾಗೆ ಕುಳಿತುಕೊಂಡ.

ಸ್ಮಿತಾ ತನ್ನ ಪುಸ್ತಕದಿಂದ ತಲೆಯೆತ್ತಿ ಪ್ರಶ್ನಾರ್ಥಕ ದೃಷ್ಟಿ ಬೀರಿದಳು. ಜೇಬಿನಲ್ಲಿದ್ದ ಮಡಿಸಿಟ್ಟ ಹಾಳೆಯನ್ನು ಅವಳೆದುರಿಟ್ಟು "ಹೇಳುವ ಹಂಬಲ ನನ್ನದೇ ಆದರೂ ಓದುವ ಸ್ವಾತಂತ್ರ್ಯ ನಿನ್ನದು. ನಾನು ಆರಿಸಿಕೊಂಡ ಈ ಪುರಾತನವಾದ ಪ್ರೇಮ ಪತ್ರದ ಮಾಧ್ಯಮ ತುಸು ಫಿಲ್ಮಿ ಅನಿಸಿದರೂ, ಅದು ಹತ್ತರಲ್ಲಿ ಹನ್ನೊಂದನೆಯದಾಗುವುದಿಲ್ಲವೆಂದು ಭಾವಿಸಿದ್ದೇನೆ. ಓದಿದ ನಂತರ ನೀನು ನನ್ನನ್ನು ನೇರವಾಗಿ ಭೇಟಿಯಾಗಲು ಬಯಸುತ್ತೇನೆ." ಎಂದ.

ಅವನು ಟಿಪ್ಪಣಿಯನ್ನು ನೀಡುವ ಮುನ್ನವೇ ಸ್ಮಿತಾ ಅವಳ ಉತ್ತರವನ್ನು ನಿರ್ಧರಿಸಿಬಿಟ್ಟಿದ್ದಳೆಂದು ಅವನಿಗೆ ತಿಳಿದೇ ಇರಲಿಲ್ಲ!







ಸ್ಮಿತಾ,


ನಿನ್ನಂತಹ ಅತಿ ಸಾಮಾನ್ಯ ಹುಡುಗಿಯನ್ನು ಪ್ರೇಮಿಸುವ ಇರಾದೆಯೇ ನನಗಿರಲಿಲ್ಲ. ನೀನು ನಮ್ಮ ಕಾಲೇಜಿನ ವಾರ್ಷಿಕಕ್ಕೆ ಬರೆದ ಕವಿತೆಗಳನ್ನು ಮೆಚ್ಚುವ ಇರಾದೆಯೂ ಇರಲಿಲ್ಲ. ಈ ಬಾರಿಯ ಎಲೆಕ್ಷನ್ ನಲ್ಲಿ ಮತ ಹಾಕದಿದ್ದವರನ್ನು ಕುರಿತು ನೀನು ನೀಡಿದ ಭಾಷಣವನ್ನು ಹೊಗಳುವ ಇರಾದೆಯೂ ಇರಲಿಲ್ಲ. ನಿನ್ನ ಬಾಲ್ಯ, ಯೌವ್ವನ, ಪ್ರೇಮ, ಸಾನ್ನಿಧ್ಯಗಳ ಬಗ್ಗೆ ನೀನು ಬರೆದಿದ್ದ ಖಾಸಗಿ ಕವನಗಳನ್ನು ನಿನ್ನ ಆಪ್ತ ಗೆಳತಿಗೆ ಓದಿ ಹೇಳುತ್ತಿದ್ದಾಗ ಅದನ್ನು ಕದ್ದು ಕೇಳುವ ಇರಾದೆಯೂ ಇರಲಿಲ್ಲ.


ಮೂರುವರೆ ತಿಂಗಳಿನಿಂದ ನೀನು ಗ್ರಂಥಾಲಯದಿಂದ ತೆಗೆದುಕೊಂಡ ಪುಸ್ತಕಗಳು ಯಾವುವೆಂದು ನನಗೆ ತಿಳಿದಿದೆ. ನಿನಗೆ ಪ್ರಿಯವಾದ ಲೇಖಕರು, ಚಿತ್ರಗಳು, ಗಾಯಕರು, ನಿರ್ದೇಶಕರು, ಹೀಗೆ ನಿನ್ನ ಅಚ್ಚುಮೆಚ್ಚುಗಳ ಪಟ್ಟಿಯನ್ನೇ ತಿಳಿದಿದ್ದೇನೆ. ನಿನ್ನ ಆಸಕ್ತಿಗಳ ಭಿನ್ನತೆ ನನ್ನನ್ನು ಅತಿಯಾಗಿ ಸೆಳೆದಿದೆ.


ಇತರ ಹುಡುಗರು ನಿನಗೆಂದು ಖರೀದಿಸಿ ನೀಡಿದ ಬಣ್ಣ ಬಣ್ಣದ ದೊಡ್ಡ ಗ್ರೀಟಿಂಗ್ ಕಾರ್ಡ್ ಗಳನ್ನು ನೀನು ನಿರ್ಭಾವದ ಶಾಂತತೆಯಿಂದ ಹರಿದು ಅವರುಗಳ ಕೈಗಿಟ್ಟಿದ್ದನ್ನು ನಾನು ನೋಡಿದ್ದೇನೆ. ಮನೆಯಂಗಳದಲ್ಲಿ ಲಂಗ ದಾವಣಿ ತೊಟ್ಟು ಕಾರ್ತಿಕ ಮಾಸದ ಸಾಲು ದೀಪಗಳನ್ನು ಬೆಳಗಿದ್ದನ್ನು ನಾನು ನೋಡಿದ್ದೇನೆ. ಹಾಗೆಯೇ, ನಿಮ್ಮ ಅತ್ತೆಯ ಮನೆಯ ಹಿತ್ತಲಿನಿಂದ ವೈನಿನ ಬಾಟಲಿಯೊಂದನ್ನು ನೀನು ಕದ್ದು ಸಾಗಿಸಿದ್ದನ್ನೂ ನೋಡಿದ್ದೇನೆ.


ನೀನು ನೂರಾರು ಬಣ್ಣಗಳಲ್ಲಿ ಮಿಂದೆದ್ದ ಕುಂಚ, ಅಚ್ಚರಿಯ ಪರಮಾವಧಿ!

ನಿನ್ನ ಹಾಗೆ ಪ್ರೇಮ ಕವಿತೆಗಳನ್ನು ಬರೆಯಲು ನನಗೆ ತಿಳಿದಿಲ್ಲ. ಆದರೆ ನಿನಗಿಷ್ಟವಾಗುವ ಹಾಗೆ, ಪೌರಾಣಿಕ ಸಿನಿಮಾಗಳ ಥರವೇ ನಿನ್ನನ್ನು 'ಪ್ರಾಣಕಾಂತೆ' ಎಂದು ಕರೆಯಬಲ್ಲೆ!


ನನ್ನ ಭಾವನೆಗಳ ಮೇಲೆ ನಾನು ತಕ್ಕ ಮಟ್ಟಿಗೆ ಹಿಡಿತ ಕಳೆದುಕೊಳ್ಳುತ್ತಿರುವ ಭಾವವನ್ನು ನಾನು ಇಷ್ಟ ಪಡುತ್ತಿರುವುದು ಇದೇ ಮೊದಲು.

ಪ್ರಥಮ ಪತ್ರಕ್ಕೆ ಇಷ್ಟು ಸಾಕು, ಇನ್ನೂ ಮಾತನಾಡುವುದು ಸಾಕಷ್ಟಿದೆ. 

ನಿರೀಕ್ಷೆಗೂ ಮೀರಿದ ತುಡಿತದಲ್ಲಿ,
ಸಂಜೀವ. 


ಮಾರನೆಯ ದಿನ ಅದೇ ಗ್ರಂಥಾಲಯದಲ್ಲಿ ಓದುತ್ತಾ ಕುಳಿತಿದ್ದ ಸಂಜೀವನನ್ನು ಕಂಡು, ಅವನ ಮೇಜಿನ ಎದುರು ಹೆಜ್ಜೆ ಹಾಕುತ್ತಾ ಅವನ ಮುಂದೆ ಇನ್ನೊಂದು ಪತ್ರವನ್ನು ಇಟ್ಟು, ಅವನ ಹೆಗಲನ್ನು ಮೃದುವಾಗಿ ಸ್ಪರ್ಶಿಸಿ, ನಡೆದು ಹೋದಳು ಸ್ಮಿತಾ.


ಪ್ರಾಣಕಾಂತ,

ನಿನ್ನ ಅಕ್ಷರಗಳು ಮುದ್ದಾಗಿವೆ. ನನ್ನ ಖಾಸಗಿ ಜೀವನಕ್ಕೆ ಸಣ್ಣಗೆ ಇಣುಕಿ ನೋಡಿದ ನಿನ್ನ ಮೇಲೆ ನನಗೆ ಕೋಪವೂ ಇದೆ, ಒಲವೂ ಇದೆ.
ಆದರೆ, ನೀನು ನನ್ನನ್ನು ನೋಡಿದ ಹಾಗೆ ನಾನೂ ನಿನ್ನನ್ನು ಕದ್ದು ನೋಡುವ ನನ್ನ ಹಕ್ಕನ್ನು ಪೂರ್ಣವಾಗಿ ಚಲಾಯಿಸುವವರೆಗೂ ನನ್ನ ಉತ್ತರವನ್ನು ಕಾಯ್ದಿರಿಸಿದ್ದೇನೆ.

ಸ್ಮಿತಾ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ